ಬಾಲಿವುಡ್ ‘ಜಂಪಿಂಗ್ ಜ್ಯಾಕ್’ ಎಂದೇ ಹೆಸರಾಗಿರುವ ಜಿತೇಂದ್ರ ಅವರ ಬಾಲ್ಯದ ಹೆಸರು ರವಿಕಪೂರ್. ನೂರಾರು ಚಿತ್ರಗಳಲ್ಲಿ ಅಭಿನಯಿಸಿದ ಜಿತೇಂದ್ರ ಬೆಳ್ಳಿತೆರೆಗೆ ಬಂದದ್ದೇ ಆಕಸ್ಮಿಕ! ಹುಟ್ಟಿದ್ದು ಪಂಜಾಬ್‌ನ ಅಮೃತ್‌ಸರ್‌ನಲ್ಲಿ (1942, ಏಪ್ರಿಲ್ 7). 1950ರ ಅಂತ್ಯದಲ್ಲಿ ನಿರ್ದೇಶಕ ವಿ.ಶಾಂತಾರಾಂ ಮಾರ್ಗದರ್ಶನದಲ್ಲಿ ಜಿತೇಂದ್ರ ಚಿತ್ರರಂಗಕ್ಕೆ ಅಡಿಯಿಟ್ಟರು. ಅವರ ತಂದೆ ವಜ್ರದ ವ್ಯಾಪಾರಿ. ತಂದೆ ನಿರ್ದೇಶಕ ಶಾಂತಾರಾಂ ಅವರಿಗೆ ವಜ್ರ ತಲುಪಿಸಲು ಹೇಳಿದ್ದರಂತೆ. ಹಾಗೆ ವ್ಯಾಪಾರಿಯಾಗಿ ಬಂದ ಜಿತೇಂದ್ರರನ್ನು ಶಾಂತಾರಾಂ ತಮ್ಮ ‘ನವರಂಗ್’ (1959) ಚಿತ್ರಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಿದ್ದರು!

ಜಿತೇಂದ್ರರಿಗೆ ಚಿತ್ರಜೀವನದಲ್ಲಿ ಮೊದಲ ತಿರುವು ಸಿಕ್ಕಿದ್ದು ‘ಗೀತ್ ಗಯಾ ಪತ್ಥರೋ ನೇ’ (1964) ಚಿತ್ರದಲ್ಲಿ. ಶಾಂತಾರಾಂ ನಿರ್ದೇಶನದ ಈ ಚಿತ್ರದ ನಂತರ ಅವರು ಹಿಂತಿರುಗಿ ನೋಡಲಿಲ್ಲ. ಅಲ್ಲಿಂದ ಮುಂದೆ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಜಿತೇಂದ್ರರ ಮೆಗಾ ಹಿಟ್ ಅಂದರೆ 1967ರಲ್ಲಿ ತೆರೆಕಂಡ ‘ಫರ್ಜ್’. ಈ ಚಿತ್ರ ವಜ್ರ ಮಹೋತ್ಸವ ಆಚರಿಸಿಕೊಂಡಿತ್ತು. ಚಿತ್ರದಲ್ಲಿ ಜಿತೇಂದ್ರ ತೊಟ್ಟಿದ್ದ ಟೀ ಷರ್ಟ್ ಮತ್ತು ಶೂ ಯುವಪೀಳಿಗೆಯಲ್ಲಿ ಕ್ರೇಜ್ ಹುಟ್ಟುಹಾಕಿದ್ದು ಹೌದು. ‘ಹಮ್‌ಜೋಲಿ’ (1970), ‘ಕಾರವಾನ್’ (1971) ಚಿತ್ರಗಳ ವಿಶಿಷ್ಟ ನೃತ್ಯದಿಂದಾಗಿ ಅವರು ‘ಜಂಪಿಂಗ್ ಜ್ಯಾಕ್’ ಎಂದೇ ಹೆಸರಾದರು.

70ರ ದಶಕದ ಆರಂಭದಲ್ಲಿ ರಾಜೇಶ್ ಖನ್ನಾ ಅವರದ್ದೇ ದೊಡ್ಡ ಹೆಸರು. ಇದರಿಂದಾಗಿ ತಾತ್ಕಾಲಿಕವಾಗಿ ಜಿತೇಂದ್ರ ಹಿನ್ನೆಡೆ ಅನುಭವಿಸುವಂತಾಯಿತು. ಮುಂದೆ ‘ಬಿದಾಯಿ’ ಚಿತ್ರದೊಂದಿಗೆ ಗೆಲುವಿನ ಹಾದಿಗೆ ಮರಳಿದರು. ಮಾಸ್ ಮತ್ತು ಕ್ಲಾಸ್ ಎರಡೂ ವರ್ಗದ ಪ್ರೇಕ್ಷಕರನ್ನು ತಲುಪುವ ನಿಟ್ಟಿನಲ್ಲಿ ನಾಟಕೀಯ ಕಥೆಗಳತ್ತ ಹೊರಳಿದರು. ಗುಲ್ಜಾರ್ ಅವರ ‘ಪರಿಚಯ್’, ‘ಖುಷ್ಬೂ’, ‘ಕಿನಾರಾ’ ಕೆಲವು ಉದಾಹರಣೆ. ಏಕತಾನತೆಗೆ ಈಡಾಗುವ ಭಯದಿಂದ ಎಚ್ಚೆತ್ತುಕೊಂಡ ಅವರು ತಮ್ಮ ಮಾರ್ಗ ಬದಲಿಸಿದರು. ‘ಆಶಾ’, ‘ಮಾಂಗ್ ಭರೋ ಸಜ್ನಾ’, ‘ಏಕ್ ಹೀ ಭೂಲ್’ ಚಿತ್ರಗಳೊಂದಿಗೆ ಕೌಟುಂಬಿಕ ಪ್ರೇಕ್ಷಕರ ಮನಸೂರೆಗೊಂಡರು.

1980ರ ಅವಧಿಯಲ್ಲಿ ಜಿತೇಂದ್ರ ಹತ್ತಾರು ಚಿತ್ರಗಳಲ್ಲಿ ಶ್ರೀದೇವಿ ಮತ್ತು ಜಯಪ್ರದಾಗೆ ಹೀರೋ ಆಗಿ ನಟಿಸಿದರು. ಬಹುತೇಕ ಈ ಚಿತ್ರಗಳೆಲ್ಲಾ ದಕ್ಷಿಣದ ಯಶಸ್ವೀ ಚಿತ್ರಗಳ ರಿಮೇಕ್‌ಗಳಾಗಿರುತ್ತಿದ್ದವು. ಪದ್ಮಾಲಯ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ತಯಾರಾದ ಈ ಚಿತ್ರಗಳು ಜಿತೇಂದ್ರರಿಗೆ ಸಾಕಷ್ಟು ಹೆಸರು ತಂದುಕೊಟ್ಟವು. ಬಣ್ಣಬಣ್ಣದ ಮಣ್ಣಿನ ಕುಡಿಕೆ, ಡಜನ್‌ಗಟ್ಟಲೆ ಸಹನೃತ್ಯ ಕಲಾವಿದರು, ಬಪ್ಪಿ ಲಹರಿ ಅವರ ಎಲೆಕ್ಟ್ರಾನಿಕ್ ಮ್ಯೂಸಿಕ್, ಇಂದೀವರ್ ಸಾಹಿತ್ಯ.. ಆ ಚಿತ್ರಗಳಲ್ಲಿ ಸಹಜವಾಗಿ ಕಾಣಿಸುತ್ತಿದ್ದ ಅಂಶಗಳಿವು. ಜಿತೇಂದ್ರ ಹೀರೋ ಆಗಿ ನಟಿಸಿದ್ದ ‘ಜಸ್ಟೀಸ್ ಜೌಧರಿ’ (1982), ‘ಮವಾಲಿ’ (1983), ‘ಹಿಮ್ಮತ್‌ವಾಲಾ’ (1983), ‘ತೋಫಾ’ (1984) ದೊಡ್ಡ ಯಶಸ್ಸು ಕಂಡವು.

ಶೋಭಾ ಕಪೂರ್‌ರನ್ನು ವರಿಸಿದ ಜಿತೇಂದ್ರರಿಗೆ ಇಬ್ಬರು ಮಕ್ಕಳು. ಪುತ್ರ ತುಷಾರ್ ಕಪೂರ್ ಹಿಂದಿ ಚಿತ್ರನಟ. ಪುತ್ರಿ ಏಕ್ತಾ ಕಪೂರ್ ಸಿನಿಮಾ ಹಾಗೂ ಕಿರುತೆರೆ ನಿರ್ಮಾಪಕಿ. ಏಕ್ತಾ ಒಡೆತನದ ಬಾಲಾಜಿ ಟೆಲಿಫಿಲ್‌ಮ್ಸ್ ಸಂಸ್ಥೆ ಹಿಂದಿ ಹಾಗೂ ದಕ್ಷಿಣ ಭಾರತದ ಭಾಷೆಗಳಲ್ಲಿ ಧಾರಾವಾಹಿಗಳನ್ನು ನಿರ್ಮಿಸುತ್ತಿದೆ. ಈ ಸಂಸ್ಥೆಯಡಿ ಕೆಲವು ಹಿಂದಿ ಚಿತ್ರಗಳೂ ತಯಾರಾಗಿವೆ. ಪುತ್ರಿ ನಿರ್ಮಿಸಿದ ‘ಕುಚ್ ತೋ ಹೈ (2002) ಚಿತ್ರದ ಪಾತ್ರವೊಂದರಲ್ಲಿ ಜಿತೇಂದ್ರ ಕೂಡ ನಟಿಸಿದ್ದರು.ಟೀವಿ ಚಾನಲ್‌ವೊಂದರ ಡ್ಯಾನ್ಸ್ ರಿಯಾಲಿಟಿ ಶೋ ‘ಝಲಕ್ ದಿಖ್ಲಾಜಾ’ಗೆ ತೀರ್ಪುಗಾರರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. 2002ರಲ್ಲಿ ಜೀವಮಾನ ಸಾಧನೆಗಾಗಿ ಜಿತೇಂದ್ರರಿಗೆ ಫಿಲ್ಮ್‌ಫೇರ್ ಗೌರವ ಸಂದಿದೆ.