ಖಾಸಗಿ ಶಾಲೆಯಲ್ಲಿ ಇಂಗ್ಲಿಷ್ ಟೀಚರ್ ಆಗಿದ್ದವರು ಪ್ರೇಮಾ ನಾರಾಯಣ್. ನಂತರ ಮಾಡೆಲಿಂಗ್ ಪ್ರವೇಶಿಸಿದ ಅವರಿಗೆ ಸೌಂದರ್ಯ ಸ್ಪರ್ಧೆಗಳು ಉತ್ತಮ ವೇದಿಕೆ ಒದಗಿಸಿದವು. ಅಲ್ಲಿನ ಜನಪ್ರಿಯತೆಯಿಂದ ಬಾಲಿವುಡ್ ಪ್ರವೇಶಿಸಿ ಹಿಂದಿ ಮತ್ತು ಬೆಂಗಾಲಿ ಚಿತ್ರಗಳಲ್ಲಿ ನಟಿಸಿದರು. ಹಿಂದಿ ತೆರೆಯಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ ಪ್ರೇಮಾ ನಾರಾಯಣ್ ಇಂದು 65ನೇ ಹುಟ್ಟುಹಬ್ಬ (04/04/1955) ಆಚರಿಸಿಕೊಳ್ಳುತ್ತಿದ್ದಾರೆ.
ಪಶ್ಚಿಮಬಂಗಾಲದ ಕಾಲಿಮ್‌ಪಾಂಗ್ ಮೂಲದ ಪ್ರೇಮಾ ಗ್ಲಾಮರ್ ಜಗತ್ತು ಪ್ರವೇಶಿಸಿದ್ದು ಮಾಡೆಲಿಂಗ್ ಮೂಲಕ. ಮುಂದೆ ‘ಮಿಸ್ ಇಂಡಿಯಾ ವರ್ಲ್ಡ್’ (1971) ವಿಜೇತೆಯಾದರು. ಅದೇ ವರ್ಷ ಅವರು ‘ಮಿಸ್ ವರ್ಲ್ಡ್’ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಲ್ಲಿ ಅವರಿಗೆ ಯಶಸ್ಸು ಸಿಗದಿದ್ದರೂ, ಸಿನಿಮಾ ಪ್ರವೇಶಕ್ಕೆ ಇದು ರಹದಾರಿಯಾಯ್ತು. ‘ಮಾ ಬೆಹೆನ್ ಔರ್ ಬೀವಿ’ ಮತ್ತು ‘ಮನ್‌ಝಿಲೆ ಔರ್ ಭಿ ಹೈ’ ಚಿತ್ರಗಳು ಆರಂಭದಲ್ಲಿ ಅವರಿಗೆ ಹೆಸರು ತಂದುಕೊಟ್ಟವು.

ಡ್ಯಾನ್ಸ್ ಮತ್ತು ವ್ಯಾಂಪ್ ಪಾತ್ರಗಳಲ್ಲಿ ಮಿಂಚಿದ ಅವರು ‘ಉಮ್ರಾವೋ ಜಾನ್’, ‘ಮಂಗಳಸೂತ್ರ್’, ಪಾತಾಳ ಭೈರವಿ’ ಚಿತ್ರಗಳಲ್ಲಿ ಸಿನಿಪ್ರಿಯರಿಗೆ ನೆನಪಾಗುತ್ತಾರೆ. ‘ಅಮಾನುಷ್’ ಚಿತ್ರದ ಉತ್ತಮ ನಟನೆಗೆ ಫಿಲ್ಮ್‌ಫೇರ್‌ನ ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು. ಪಾಶ್ಚಿಮಾತ್ಯ ಸಂಸ್ಕೃತಿ ಓಲೈಸುವ ಯುವತಿಯ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸಿದ ಪ್ರೇಮಾ ತೆರೆ ಮೇಲೆ ಕಾಣಿಸಿಕೊಂಡ ಕೊನೆಯ ಸಿನಿಮಾ ‘ಯೆಹ್ ಬಸ್ತಿ ಬದ್ಮಾಷೋ ಕಿ’ (1999). ಅವರ ಪತಿ ರಾಜೀವ್ ವೃತ್ತಿಯಲ್ಲಿ ವಕೀಲರು. ಎರಡು ಮಕ್ಕಳ ತಾಯಿ ಪ್ರೇಮಾ ಸಂತೃಪ್ತ ಬದುಕು ನಡೆಸುತ್ತಿದ್ದಾರೆ.