
ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ
‘ನೀವು ಚಿತ್ರದಲ್ಲಿ ನೋಡುವುದು ಸೆಟ್. ತದ್ರೂಪು ಅಷ್ಟೇ. ಅದು ಕಲಾ ನಿರ್ದೇಶಕ ಚಲಂರವರ ಕೈಚಳಕ’ ಎಂದರು ನಿರ್ದೇಶಕ ಪುಟ್ಟಣ್ಣ. ಅಂದು ಚಲಂ ನಮ್ಮೊಂದಿಗಿದ್ದರು. ಅಲ್ಲೇ ಡ್ರಾಯಿಂಗ್ ಮಾಡಿಕೊಂಡರು.
1973ರಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ಚಿತ್ರೀಕರಣ ಆರಂಭಿಸುವ ಮೊದಲು ಕಾದಂಬರಿಯಲ್ಲಿ ಬರುವ ಬಹು ಮುಖ್ಯವಾದ ಗವಿಯನ್ನು ವೀಕ್ಷಿಸಲು ಚಲನಚಿತ್ರ ಪತ್ರಕರ್ತರನ್ನು ಆ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಆ ತಂಡದಲ್ಲಿ ನಾನು ಸಹ ಇದ್ದೆ. ಆಗ ನಾನು ‘ಮೇನಕಾ’ ಚಲನಚಿತ್ರ ಪತ್ರಿಕೆಗೆ ವಿಶೇಷ ಪೋಟೋಗಳನ್ನು ಒದಗಿಸುತ್ತಿದ್ದೆ.
ಈ ಸ್ಥಳವು ಕೇರಳದ ಸುಲ್ತಾನ್ ಬತ್ತೇರಿ ಹತ್ತಿರ ಇದೆ. ಆಗ ಆ ಜಾಗ ಅತ್ಯಂತ ದುರ್ಗಮವಾಗಿ ಬೆಟ್ಟ ಹತ್ತಲು ಬಹಳ ಕಷ್ಠವಾಗಿತ್ತು. ಕಲ್ಲು, ಮುಳ್ಳು, ಬಂಡೆ ದಾಟಿ ಹೋಗಬೇಕಾಗಿತ್ತು. ಹಲವಾರು ಪತ್ರಕರ್ತರು ಜಾರಿ ಬೀಳುತ್ತಿದ್ದರು. ಆಗ ಪುಟ್ಟಣ್ಣನವರು, “ನಾವು ಸಿನಿಮಾ ಮಂದಿ ಚಿತ್ರೀಕರಣ ನಡೆಸಲು ಎಷ್ಟು ಕಷ್ಟ ಪಡುತ್ತೇವೆ. ಅದು ನಿಮಗೆ ಗೊತ್ತಾಗಲಿ ಎಂದು ನಿಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ. ನೀವು ಸುಖಾಸಮ್ಮನೆ ಆಫೀಸ್‌ನಲ್ಲಿ ಕಾಫಿ ಕುಡಿಯುತ್ತಾ ನಮ್ಮ ಚಿತ್ರಗಳ ವಿಮರ್ಶೆ ಬರೆದುಬಿಡುತ್ತಿರಿ. ಇದೂ ಅನುಭವವಾಗಲಿ”, ಎಂದು ಹುರಿದುಂಬಿಸುತ್ತ ಆ ಗುಹೆಗೆ ಕರೆದುಕೊಂಡು ಹೋದರು.
ಆ ಸ್ಥಳಕ್ಕೆ ಹೋದ ಪ್ರತಿಯೊಬ್ಬರೂ ರೋಮಾಂಚನಗೊಂಡರು. ಅಷ್ಟು ಚೆನ್ನಾಗಿತ್ತು ಆ ಜಾಗ. ಸ್ವಚ್ಛ ನೀರಿನ ಕೊಳ, ತಂಪಾದ ವಾತಾವರಣ. “ನೀವು ಚಿತ್ರದಲ್ಲಿ ನೋಡುವುದು ಸೆಟ್ ತದ್ರೂಪು ಅಷ್ಟೇ. ಅದು ಕಲಾ ನಿರ್ದೇಶಕ ಚಲಂರವರ ಕೈಚಳಕ” ಎಂದರು ನಿರ್ದೇಶಕ ಪುಟ್ಟಣ್ಣ. ಕಲಾನಿರ್ದೇಶಕ ಚಲಂ ಅಂದು ನಮ್ಮೊಂದಿಗೆ ಬಂದಿದ್ದರು. ಅಲ್ಲೆ ಗುಹೆಯ ಹತ್ತಾರು ಡ್ರಾಯಿಂಗ್ ಮಾಡಿಕೊಂಡರು. ಆ ಸ್ಥಳದಲ್ಲಿ ಆ ದಿನಗಳಲ್ಲಿ ಬಾರಿ ಗಾತ್ರದ ಚಿತ್ರೀಕರಣದ ಪರಿಕರಗಳನ್ನು ಸಾಗಿಸಿ ಚಿತ್ರೀಕರಿಸುವುದು ಸಾಧ್ಯವಾಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ತೆಗೆದಿರುವ ಕೆಲವು ಪೋಟೋಗಳು ಇಲ್ಲಿ ಇವೆ. ಈಗ ಆ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಗುಹೆಗೆ ದಾರಿ ಮಾರ್ಗಮಧ್ಯೆ ದುರ್ಗಮ ಹಾದಿ ಗುಹೆಯ ಒಳಗೆ.. ಗುಹೆಯ ಒಳಗೆ.. ಮಾರ್ಗಮಧ್ಯೆ ವಿಶ್ರಾಂತಿ ಗುಹೆಯಲ್ಲಿ ಅಂದಿನ ಚಲನಚಿತ್ರ ಪತ್ರಕರ್ತರು – ಹ. ವೇಂ. ಸೀತಾರಾಮಯ್ಯ,, ಟಿ.ಜಿ.ಅಶ್ವತ್ಥನಾರಾಣ, ಬಿ.ಎಮ್.ಕೃಷ್ಣಮೂರ್ತಿ, ಶ್ರೀ ಕೃಪಾ, ರಾಮಕೃಷ್ಣಯ್ಯ,, ಸೀತಾರಾಂ ಮುಂತಾದವರು. ನಿರ್ದೇಶಕ ಪುಟ್ಟಣ್ಣ ಕಣಗಾಲ್, ಛಾಯಾಗ್ರಹಕ ಶ್ರೀಕಾಂತ್, ಕಲಾ ನಿರ್ದೇಶಕ ಚಲಂ. ಸಹಾಯಕ ನಿರ್ದೇಶಕ ದತ್ತು ಮತ್ತಿತರರು ಇದ್ದಾರೆ. ಪತ್ರಕರ್ತರು ಹಾಗೂ ಚಿತ್ರದ ತಂತ್ರಜ್ಞರೊಂದಿಗೆ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ (ಬಲ ತುದಿಯಲ್ಲಿ ಇರುವವರು) ಗುಹೆಯ ಸ್ಕೆಚ್ ಮಾಡುತ್ತಿರುವ ಕಲಾ ನಿರ್ದೇಶಕ ಚಲಂ