ಹಿಂದಿ ರಂಗಭೂಮಿಯಲ್ಲಿ ದಶಕಗಳಿಂದ ನಟಿಸುತ್ತಿರುವ ಸುರೇಖಾ ಉತ್ತಮ ನಟನೆಗೆ ಮೂರು ಬಾರಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ. ‘ತಮಸ್’ (1988), ‘ಮಮ್ಮೊ’ (1995) ಮತ್ತು ‘ಬಧಾಯಿ ಹೋ’ (2018) ಚಿತ್ರಗಳ ಉತ್ತಮ ನಟನೆಗೆ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ. ಹಿಂದಿ ರಂಗಭೂಮಿಗೆ ಸಂದ ಅವರ ಸೇವೆ ಪರಿಗಣಿಸಿ ಸಂಗೀತ ನಾಟಕ ಅಕಾಡೆಮಿ ಗೌರವ (2011) ನೀಡಲಾಗಿದೆ.

ಉತ್ತರ ಪ್ರದೇಶ ಮೂಲದ ಸುರೇಖಾ ಸಿಕ್ರಿ ಕಾಲೇಜು ಓದಿನ ಸಂದರ್ಭದಲ್ಲೇ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. 1971ರಲ್ಲಿ ಅವರು ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪದವಿ ಪಡೆದು ಒಂದು ದಶಕ ಎನ್‌ಎಸ್‌ಡಿ ರೆಪರ್ಟರಿಯಲ್ಲಿ ಕೆಲಸ ಮಾಡಿದರು. ಅಮೃತ್ ನಹತಾ ನಿರ್ದೇಶನದ ‘ಕಿಸ್ಸಾ ಕುರ್ಸಿ ಕಾ’ (1978) ಚಿತ್ರದೊಂದಿಗೆ ಸುರೇಖಾ ಅವರ ಸಿನಿಮಾ ನಂಟು ಆರಂಭವಾಯ್ತು. ಸುರೇಖಾ ತಮಗೆ ಸಿಕ್ಕ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳಲಿಲ್ಲ. ಸಿನಿಮಾಗಳ ಸಂಖ್ಯೆಗಿಂತ ಗುಣಮಟ್ಟ ಮುಖ್ಯ ಎನ್ನುವುದು ಅವರ ನಿಯಮ. ಆಗಿಂದಾಗ್ಗೆ ಅಪರೂಪದ ಪಾತ್ರಗಳಲ್ಲಿ ನಟಿಸಿದ ಅವರು ರಂಗಭೂಮಿ ನಿರಂತರ ಒಡನಾಟದಲ್ಲಿದ್ದರು. ಕಿರುತೆರೆ ಸರಣಿಗಳಲ್ಲಿನ ಪಾತ್ರಗಳು ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿವೆ.
