ಬಹುಭಾಷಾ ನಟ ಕಮಲ ಹಾಸನ್ ‘ಕಳತ್ತೂರ್ ಕಣ್ಣಮ್ಮ’ (1960) ಚಿತ್ರದ ಬಾಲನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ಆಗ ಅವರಿಗೆ ಐದು ವರ್ಷ. ಚಿತ್ರದ ಉತ್ತಮ ನಟನೆಗೆ ಪುಟಾಣಿ ಕಮಲ್‌ಗೆ ರಾಷ್ಟ್ರಪತಿ ಸ್ವರ್ಣಕಮಲದ ಗೌರವ ಲಭಿಸಿತ್ತು. 60 ವರ್ಷಗಳ ಹಿಂದೆ 1961ರ ಮಾರ್ಚ್ 31ರ ಇದೇ ದಿನ ದಿಲ್ಲಿಯಲ್ಲಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರಿಂದ ಕಮಲ್ ಪ್ರಶಸ್ತಿ ಸ್ವೀಕರಿಸಿದ್ದರು. ಚಿತ್ರ ಬಿಡುಗಡೆಯಾದ ಮರುವರ್ಷ (1961) ಅವರು ಪ್ರಶಸ್ತಿ ಸ್ವೀಕರಿಸಿದ್ದರು. ಮುಂದೆ ನಾಯಕನಟ – ನಿರ್ಮಾಪಕನಾಗಿ ಅವರು ನಾಲ್ಕು ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

ಈ ಚಿತ್ರದಲ್ಲಿ ಬಾಲಕನ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇದೆ. ಅದಾಗಲೇ ಪಾತ್ರಕ್ಕೆ ಡೈಸಿ ರಾಣಿ ಹೆಸರಿನ ಬಾಲನಟಿ ಆಯ್ಕೆಯಾಗಿದ್ದರು. ಕಮಲ ಹಾಸನ್ ಕುಟುಂಬದ ಆಪ್ತರೊಬ್ಬರು ಚಿತ್ರದ ನಿರ್ಮಾಪಕ ಎ.ವಿ.ಮೇಯಪ್ಪನ್ ಅವರಿಗೆ ಚಿರಪರಿಚಿತರು. ಚಿತ್ರೀಕರಣ ಆರಂಭವಾಗುವ ಹಂತದಲ್ಲಿ ನಿರ್ಮಾಪಕರಿಗೆ ಅವರು ಪುಟಾಣಿ ಕಮಲ ಹಾಸನ್‌ರನ್ನು ಪರಿಚಯಿಸಿದ್ದರು. ಅಂತಿಮವಾಗಿ ಬಾಲನಟನ ಪಾತ್ರಕ್ಕೆ ಕಮಲ್ ಆಯ್ಕೆಯಾಗಿ ಎಲ್ಲರೂ ಮೆಚ್ಚುವ ಅಭಿನಯ ನೀಡಿದರು. ಈ ಯಶಸ್ವೀ ತಮಿಳು ಸಿನಿಮಾ ತೆಲುಗು, ಹಿಂದಿ ಮತ್ತು ಸಿನ್ಹಳ ಭಾಷೆಗೆ ರೀಮೇಕಾಗಿದೆ.
(ಮಾಹಿತಿ ಕೃಪೆ: ವೆಂಕಟೇಶ್ ನಾರಾಯಣಸ್ವಾಮಿ)