
ನಟ
ನಟ ಹೊನ್ನವಳ್ಳಿ ಕೃಷ್ಣ ಇಂದು (ಮೇ 21) 72ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ನಟನೆ ಜೊತೆಗೆ 40ಕ್ಕೂ ಹೆಚ್ಚು ಚಿತ್ರಗಳಿಗೆ ಅವರು ಸಹನಿರ್ದೇಶಕರೂ ಹೌದು. ಹೀಗೆ ನಟ – ಸಹನಿರ್ದೇಶಕನಾಗಿ ‘ಶ್ರೀನಿವಾಸ ಕಲ್ಯಾಣ’ ಸಿನಿಮಾದಲ್ಲಿ ಕೆಲಸ ಮಾಡುವಾಗಿನ ಶೂಟಿಂಗ್ ಸೋಜಿಗವೊಂದನ್ನು ನೆನಪು ಮಾಡಿಕೊಂಡಿದ್ದಾರೆ.
ಡಾ.ರಾಜ್‍ಕುಮಾರ್ ಅಭಿನಯದ `ಶ್ರೀನಿವಾಸ ಕಲ್ಯಾಣ’ ಚಿತ್ರಕ್ಕೆ ತಿರುಪತಿಯಲ್ಲಿ ಶೂಟಿಂಗ್ ನಡೆಯುತ್ತಿತ್ತು. ವಿಜಯಾ ರೆಡ್ಡಿ ನಿರ್ದೇಶನದ ಚಿತ್ರವಿದು. ನಾನು ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದೆ. ನಿರ್ದೇಶನದಲ್ಲಿ ಸಹಾಯ ಮಾಡುವುದಲ್ಲದೆ ಚಿತ್ರದಲ್ಲಿ ಪುಟ್ಟ ಪಾತ್ರವೊಂದನ್ನೂ ನಿರ್ವಹಿಸುತ್ತಿದ್ದೆ. ಮುಂದಿನ ದಿನಗಳಲ್ಲಿ ನಿರ್ದೇಶಕರಾಗಿ ಹೆಸರು ಮಾಡಿರುವ ಎಂ.ಎಸ್.ರಾಜಶೇಖರ್, ಬಿ.ಮಲ್ಲೇಶ್ ಅವರಿಗೂ ಚಿತ್ರದಲ್ಲಿ ಪುಟ್ಟ ಪಾತ್ರಗಳಿದ್ದವು. ಹಿರಿಯ ನಟ ರಾಮಚಂದ್ರ ಶಾಸ್ತ್ರಿಗಳ ಶಿಷ್ಯರಾಗಿ ನಾವೆಲ್ಲಾ ಚಿತ್ರದಲ್ಲಿ ಪಾತ್ರ ಮಾಡುತ್ತಿದ್ದೆವು.
ಶಿಷ್ಯಂದಿರ ಪಾತ್ರಗಳಲ್ಲಿದ್ದ ನಮಗೆ ದಿನವೂ ಮುಂಜಾನೆಯೇ ತಲೆ ಬೋಳಿಸಲಾಗುತ್ತಿತ್ತು. ನಂತರ ಹಣೆ, ಎದೆ ಮೇಲೆ ಬಿಳಿ ನಾಮಗಳನ್ನು ಹಾಕುತ್ತಿದ್ದರು. ನಿರ್ದೇಶಕ ವಿಜಯಾ ರೆಡ್ಡಿಯವರು ಶೂಟಿಂಗ್ ವೇಳೆ ಜನರನ್ನು ನಿಯಂತ್ರಿಸುವ ಕೆಲಸವನ್ನು ನನಗೆ ವಹಿಸಿದ್ದರು. ಇದರ ಜತೆಗೆ ಕ್ಲ್ಯಾಪ್ ಮಾಡುವ ಹೊಣೆಯೂ ನನ್ನದಾಗಿತ್ತು. ಅಲ್ಲದೆ ಪಾತ್ರಕ್ಕೆ ಕರೆ ಬಂದಾಗ ಓಡಿ ಹೋಗಿ ಅಭಿನಯಿಸುತ್ತಿದ್ದೆ. ತಿರುಪತಿಯ ಬಿರುಬಿಸಿಲಿನಲ್ಲಿ ಹದಿನೈದು ದಿನ ಶೂಟಿಂಗ್ ನಡೆಯಿತು.
`ಶ್ರೀನಿವಾಸ ಕಲ್ಯಾಣ’ ಚಿತ್ರಕ್ಕೆ ಚಿಟ್ಟಿ ಬಾಬು ಛಾಯಾಗ್ರಹಣ ಮಾಡುತ್ತಿದ್ದರು. ಅವರು ಔಟ್‍ಡೋರ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಿಫ್ಲೆಕ್ಟರ್ ಬಳಕೆ ಮಾಡುತ್ತಿದ್ದರು. ಇವುಗಳಿಂದ ಪ್ರತಿಫಲಿಸಿದ ಬಿಸಿಲು ಕಲಾವಿದರಾದ ನಮಗೆ ತೀವ್ರವಾಗಿ ತಾಕುತ್ತಿತ್ತು. ಇದರ ಪರಿಣಾಮ ಹಾಗೂ ಶೂಟಿಂಗ್ ನಿಮಿತ್ತ ಬಿಸಿಲಿನಲ್ಲಿ ಓಡಾಡುತ್ತಿದ್ದ ನಾನು ಚಿತ್ರೀಕರಣ ಮುಗಿಯುವ ಹೊತ್ತಿಗೆ ಕಪ್ಪಾಗಿದ್ದೆ. ಹಣೆ ಹಾಗೂ ಎದೆಯ ಮೇಲಿನ ನಾಮಗಳನ್ನು ಅಳಿಸಿದರೂ, ಅವು ಪೂರ್ಣ ಮರೆಯಾಗಿರಲಿಲ್ಲ. ದೇಹದ ಮೇಲೆ ನಾಮದ ಕಲೆಗಳು ಹಾಗೆಯೇ ಉಳಿದಿದ್ದವು!
ಚಿತ್ರಕ್ಕೆ ಶೂಟಿಂಗ್ ಮುಗಿದ ನಂತರ ನಾವು ಸುಮಾರು 20 ಮಂದಿ ವೆಂಕಟರಮಣಸ್ವಾಮಿ ದೇವರ ದರ್ಶನ ಮಾಡಲು ಹೊರಟೆವು. ದೇವರ ದರ್ಶನಕ್ಕೆ ಸಾಲುಗಟ್ಟಿದ ಭಕ್ತರನ್ನು ಸರದಿಯ ಮೇಲೆ ಬಾಕ್ಸ್ ಒಂದರಲ್ಲಿ ನಿಲ್ಲಿಸುವುದು ತಿರುಪತಿಯಲ್ಲಿನ ಪದ್ಧತಿ. ಅದರಂತೆ ಚಿತ್ರತಂಡದ ಮಂದಿ ಎಲ್ಲರೂ ಒಂದು ಬಾಕ್ಸ್‍ನಲ್ಲಿ ಸೇರಿಕೊಂಡರು. ಇತರೆ ಭಕ್ತರೂ ಸೇರಿದಂತೆ ಅಲ್ಲಿ ಸುಮಾರು ಸಾವಿರ ಭಕ್ತರಿದ್ದರು. ಬಿಳಿ ಪಂಚೆ ತೊಟ್ಟಿದ್ದ ನಾನು ಎಲ್ಲರ ಮಧ್ಯೆ ಕುಳಿತಿದ್ದೆ. ನನ್ನ ಹಣೆ ಹಾಗೂ ಎದೆಯ ಮೇಲೆ ಅಳಿಸಿ ಹೋಗದ ನಾಮದ ಕಲೆಗಳು!

ಬಾಕ್ಸ್‍ನಲ್ಲಿದ್ದ ಭಕ್ತನೊಬ್ಬ ನನ್ನನ್ನು ಕುತೂಹಲದಿಂದ ಗಮನಿಸುತ್ತಿದ್ದ. ಹತ್ತಿರ ಬಂದವನೇ, `ಏನ್ ಸಾರ್ ನಾಮವುಂದಿ, ಏನ್ ಸಮಾಚಾರಮು’ ಎಂದು ಕೇಳಿದ. ಚಿತ್ರತಂಡದಲ್ಲಿದ್ದ ಎಸ್.ಎ.ಶ್ರೀನಿವಾಸ್ (ಇವರು ಪಾರ್ವತಮ್ಮ ರಾಜ್‍ಕುಮಾರ್ ಕಿರಿಯ ಸಹೋದರ) ಅವರಿಗೆ ಕೊಂಚ ತಮಾಷೆ ಮಾಡಬೇಕೆನ್ನಿಸಿತು. `ಇವನು ಮಹಾವಿಷ್ಣುವಿನ ಅಂಶ. ಹುಟ್ಟುವಾಗಲೇ ಈತನ ದೇಹದ ಮೇಲೆ ನಾಮಗಳಿದ್ದವು! ನಮ್ಮ ಮಠದ ಈ ಯೋಗ ಪುರುಷನನ್ನು ದೇವರ ದರ್ಶನಕ್ಕಾಗಿ ಕರೆದುಕೊಂಡು ಬಂದಿದ್ದೇವೆ’ ಎಂದು ಹೇಳಿಬಿಟ್ಟರು ಶ್ರೀನಿವಾಸ್. ಆ ಭಕ್ತನಿಗೆ ಇದಿಷ್ಟೇ ಸಾಕಾಯಿತು. `ಚೂಡ್ರಾ, ನಾಮವುಂದಿ ಇವ್ನಿಕಿ..!’ ಎಂದು ಜೋರಾಗಿ ಕೂಗಿಬಿಟ್ಟ. ಅದಕ್ಕೆ ಸರಿಯಾಗಿ ನಾನು ಕೂಡ ಗಂಭೀರವಾಗಿ ಪೋಸ್ ಕೊಟ್ಟೆ!
ಕ್ಷಣಮಾತ್ರದಲ್ಲಿ ಸಂಚಲನವೇ ಉಂಟಾಯಿತು. ಬಾಕ್ಸ್‍ನಲ್ಲಿದ್ದ ಭಕ್ತರು ನನ್ನನ್ನು ಕಾಣಲು ಓಡಿ ಬಂದರು. ನಿರ್ದೇಶಕ ವಿಜಯಾ ರೆಡ್ಡಿ, `ಬ್ರಹ್ಮಜ್ಞಾನಿ ವಚ್ಚಿನ್ನಾಡು, ಸುಮ್ಮನೆ ನಮಸ್ಕರಿಸಿದರೆ ಹೇಗೆ? ಕಾಣಿಕೆ ಹಾಕಿ’ ಎನ್ನುತ್ತಿದ್ದಂತೆ ಅಲ್ಲಿದ್ದ ಭಕ್ತರಲ್ಲಿ ಭಾವಪರವಶತೆ ಹೆಚ್ಚಾಯಿತು. 1,2,10 ರೂಪಾಯಿಗಳಂತೆ ಕಾಣಿಕೆ ಹಾಕಿದ ಭಕ್ತರು `ಯೋಗ ಪುರುಷ’ನೆಂದು ನನಗೆ ನಮಸ್ಕಾರ ಹಾಕತೊಡಗಿದರು. ಒಂದೆರೆಡು ನಿಮಿಷಗಳಲ್ಲಿ ನೂಕು – ನುಗ್ಗಲು ಹೆಚ್ಚಾಯಿತು. ನನ್ನನ್ನು ಮುಟ್ಟುವ, ನಮಸ್ಕರಿಸುವ ಭರದಲ್ಲಿ ಜಗಳವೇ ಆಗಿಹೋಯ್ತು! ನುಗ್ಗಾಟದಲ್ಲಿ ನಾನು ಬಡಪಾಯಿಯಾದೆ. ಬಾಕ್ಸ್‍ನಲ್ಲಿ ಗಲಾಟೆಯಾಗುತ್ತಿದ್ದಂತೆ ಸೆಕ್ಯೂರಿಟಿಯವರು ಓಡಿ ಬಂದು ಬಾಗಿಲು ತೆಗೆದರು. ನಿರ್ದೇಶಕ ವಿಜಯಾ ರೆಡ್ಡಿ ಮತ್ತು ಚಿತ್ರತಂಡದ ಒಂದಿಬ್ಬರು ನನ್ನನ್ನು ಅಕ್ಷರಶಃ ಹೊತ್ತುಕೊಂಡು ಬರಬೇಕಾಯ್ತು. ಹೊರಗೆ ಬಂದ ನನ್ನ ದೇಹದ ಮೇಲೆಲ್ಲಾ ಭಕ್ತರು ಪರಿಚಿದ, ತಳ್ಳಿದ ಗಾಯದ ಗುರುತುಗಳು!