ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಜನೀಕಾಂತ್ ಓದು ಮುಗಿಸಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸಿದ್ದು ಕೂಡ ಇಲ್ಲಿಯೇ. ಮುಂದೆ ಮದರಾಸಿನ ಅಭಿನಯದ ಶಾಲೆಯಲ್ಲಿ ತರಬೇತಿ ಪಡೆದು ಬೆಳ್ಳಿತೆರೆ ಪ್ರವೇಶಿಸಿದರು. ಪ್ರತಿಭೆ ಜೊತೆ ಅದೃಷ್ಟವೂ ಅವರಿಗೆ ಜೊತೆಯಾಗಿ ದೊಡ್ಡ ತಾರೆಯಾಗಿ ಬೆಳೆದರು. ನಟನಾ ಬದುಕಿನ ಆರಂಭದ ದಿನಗಳಲ್ಲಿ ಕನ್ನಡ ಚಿತ್ರಗಳಲ್ಲೂ ಅವರು ನಟಿಸಿದರು. ಅದೇಕೋ ಕನ್ನಡ ಬೆಳ್ಳಿತೆರೆಯಲ್ಲಿ ರಜನಿಗೆ ಗೆಲುವು ಸಿಗಲಿಲ್ಲ.
ಅವರು ಕೆಲವು ಸಿನಿಮಾಗಳು ಕಥಾವಸ್ತುವಿನ ಕಾರಣಕ್ಕೆ ಗಮನ ಸೆಳೆದವಾದರೂ ಹಣಗಳಿಕೆಯಲ್ಲಿ ಹಿಂದುಳಿದವು. 1976ರಿಂದ 81ರವರೆಗೆ ಅವರು ಕನ್ನಡದ ಹನ್ನೊಂದು ಸಿನಿಮಾಗಳಲ್ಲಿ ಅಭಿನಯಿಸಿದರು. ಪುಟ್ಟಣ್ಣನವರ `ಕಥಾಸಂಗಮ’ ಚಿತ್ರದಲ್ಲಿನ ಅವರ ನೆಗೆಟಿವ್ ಶೇಡ್ ಪಾತ್ರ ಕನ್ನಡಿಗರಿಗೆ ನೆನಪಾಗದಿರದು. ಇನ್ನು `ಸಹೋದರರ ಸವಾಲ್’, `ಕಿಲಾಡಿ ಕಿಟ್ಟು’ ಚಿತ್ರಗಳಲ್ಲಿ `ಸ್ಟೈಲ್‍ಕಿಂಗ್’ಗೆ ದೊಡ್ಡ ಮನ್ನಣೆ ಸಿಗಲಿಲ್ಲ. ಗುರು ಕೆ.ಬಾಲಚಂದರ್ ನಿರ್ದೇಶನದಲ್ಲಿ ತೆರೆಕಂಡ `ತಪ್ಪಿದ ತಾಳ’ ಒಂದೊಳ್ಳೆಯ ಪ್ರಯೋಗವಾಗಿ ವಿಶ್ಲೇಷಕರನ್ನು ಸೆಳೆಯಿತು. ಒಂದೊಮ್ಮೆ ಕನ್ನಡ ಸಿನಿಮಾಗಳು ಯಶಸ್ಸು ತಂದುಕೊಟ್ಟಿದ್ದರೆ ರಜನಿ ಇಲ್ಲಿಯೇ ಉಳಿಯುತ್ತಿದ್ದರೇನೋ!?

ರಜನೀ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ:
ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಕಥಾಸಂಗಮ’ (1976)
ಬಾಲನ್ ನಿರ್ದೇಶನದ ‘ಬಾಳು ಜೇನು’ (1976)
ಜೋಸೈಮನ್ ನಿರ್ದೇಶನದ ‘ಒಂದು ಪ್ರೇಮದ ಕಥೆ’ (1977)
ಕೆ.ಎಸ್.ಆರ್.ದಾಸ್ ನಿರ್ದೇಶನದ ‘ಸಹೋದರರ ಸವಾಲ್’ (1977)
ಎಸ್.ಕೆ.ಎ. ಚಾರಿ ನಿರ್ದೇಶನದ ‘ಕುಂಕುಮ ರಕ್ಷೆ’ (1977)
ಸಿ.ವಿ.ರಾಜೇಂದ್ರನ್ ನಿರ್ದೇಶನದ ‘ಗಲಾಟೆ ಸಂಸಾರ’ (1977)
ಕೆ.ಎಸ್.ಆರ್.ದಾಸ್ ನಿರ್ದೇಶನದ ‘ಕಿಲಾಡಿ ಕಿಟ್ಟು’ (1978)
ಪೀಕೆಟಿ ಶಿವರಾಂ ನಿರ್ದೇಶನದ ‘ಮಾತು ತಪ್ಪದ ಮಗ’ (1978)
ಕೆ.ಬಾಲಚಂದರ್ ನಿರ್ದೇಶನದ ‘ತಪ್ಪಿದ ತಾಳ’ (1978)
ಎಸ್.ಪಿ.ಮುತ್ತುರಾಮನ್ ನಿರ್ದೇಶನದ ‘ಪ್ರಿಯಾ’ (1979)
ಸಿ.ವಿ.ರಾಜೇಂದ್ರನ್ ನಿರ್ದೇಶನದ ‘ಘರ್ಜನೆ’ (1981)